ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಕಾಸರಗೋಡಿಗೆ ಯಕ್ಷಗಾನ ಮ್ಯೂಸಿಯಂ

ಲೇಖಕರು : ವಿಜಯ ಕರ್ನಾಟಕ
ಬುಧವಾರ, ಫೆಬ್ರವರಿ 24 , 2016
``ನಮ್ಮ ಕಾಸರಗೋಡಿದು, ಯಕ್ಷಗಾನದ ಬೀಡಿದು...`` ಎಂಬ ಕವಿತೆಯ ಸಾಲುಗಳನ್ನು ಪ್ರಾಥಮಿಕ ತರಗತಿಗಳ ಪಠ್ಯ ಪುಸ್ತಕದಲ್ಲಿ ಅನೇಕರು ಓದಿದ್ದೇವೆ. ಈ ಪದ್ಯದ ಸಾಲುಗಳು ಪ್ರಸ್ತುತ ಮತ್ತಷ್ಟು ಸಾರ್ಥಕತೆ ಪಡೆದಿವೆ. ಯಕ್ಷಗಾನ ಕಲೆಗೆ ಪ್ರಾಧಾನ್ಯತೆ ನೀಡಿದ ಕಾಸರಗೋಡಿನಲ್ಲಿ ಇಂದಿಗೂ ಯಕ್ಷಗಾನ ಬೆಳೆಯುತ್ತಿದ್ದು, ಇದಕ್ಕೆ ಇನ್ನಷ್ಟು ಪ್ರಸಿದ್ಧಿ ನೀಡಲು ಯಕ್ಷಗಾನ ಮ್ಯೂಸಿಯಂ ಸಿದ್ಧವಾಗಿದೆ.

ಡಾ. ಪ್ರಭಾಕರನ್ ಆಯೋಗದ ವರದಿಯನ್ವಯ ಕಾಸರಗೋಡು ಅಭಿವೃದ್ಧಿ ಪ್ಯಾಕೆಜ್ ಅಂಗವಾಗಿ ಕಾಸರಗೋಡಿಗೆ ಯಕ್ಷಗಾನ ಸಂಶೋಧನಾ ಕೇಂದ್ರ ಮಂಜೂರುಗೊಂಡಿದೆ. ವಿದ್ಯಾನಗರದಲ್ಲಿರುವ ಕಾಸರಗೋಡು ಸರಕಾರಿ ಕಾಲೇಜಿನ ಕಟ್ಟಡದಲ್ಲಿ ಸಂಶೋಧನಾ ಕೇಂದ್ರ ಕಾರ್ಯಾರಂಭಗೊಳ್ಳಲಿದೆ. ಒಟ್ಟು 5 ಲಕ್ಷ ರೂ. ಯೋಜನೆಯಲ್ಲಿ 50 ಸಾವಿರ ರೂ.ವನ್ನು ಸಂಶೋಧನಾ ಕೇಂದ್ರದ ಗ್ರಂಥಾಲಯಕ್ಕಾಗಿ ಮೀಸಲಿರಿಸಲಾಗಿದೆ. ಮಾ.1ರಂದು ಕಾಲೇಜಿನ ಕನ್ನಡ ವಿಭಾಗ ಸಮೀಪದ ಕೊಠಡಿಯಲ್ಲಿ ಯಕ್ಷಗಾನ ಸಂಶೋಧನಾ ಕೇಂದ್ರ ಉದ್ಘಾಟನೆಗೊಳ್ಳಲಿದೆ. ಇದರೊಂದಿಗೆ ಯಕ್ಷಗಾನ ಮ್ಯೂಸಿಯಂ, ಯಕ್ಷಗಾನ ಗ್ರಂಥಾಲಯ ಕಾರ್ಯಾರಂಭಗೊಳ್ಳಲಿದೆ. ಕೇಂದ್ರ ಆರಂಭ ಗೊಳ್ಳುವುದರೊಂದಿಗೆ ಕಾಸರಗೋಡಿನ ಕನ್ನಡಿಗರ, ಹಲವು ವರ್ಷಗಳಿಂದ ಯಕ್ಷಗಾನ ಕಲೆಯನ್ನು ಆರಾಧಿಸುತ್ತಿರುವ ಯಕ್ಷಗಾನ ಕಲಾವಿದರು-ಕಲಾಸಕ್ತರ ಹಾಗೂ ಸಂಶೋಧನಾಸಕ್ತ ವಿದ್ಯಾರ್ಥಿಗಳ ಬಹುಕಾಲದ ನೀರೀಕ್ಷೆಯೊಂದು ಸಾಕಾರಗೊಳ್ಳಲಿದೆ.

ಜಿಲ್ಲಾಧಿಕಾರಿ ಪಿ. ಎಸ್. ಮುಹಮ್ಮದ್ ಸಗೀರ್ ಅವರ ನಿರ್ದೇಶನದಂತೆ ಈ ಸಂಶೋಧನಾ ಕೇಂದ್ರವನ್ನು ಮುನ್ನಡೆಸಲು ಈಗಾಗಲೇ ಆಡಳಿತ ಮಂಡಳಿ ರಚಿಸಲಾಗಿದೆ. ಕಾಲೇಜು ಪ್ರಿನ್ಸಿಪಾಲರು ಅಧ್ಯಕ್ಷರು, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಸಂಯೋಜನಾಧಿಕಾರಿ, ಸಹಾಯಕ ಪ್ರಾಧ್ಯಾಪಕ ಶ್ರೀಧರ ಏತಡ್ಕ ವಕ್ತಾರರು, ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತ ಎಸ್., ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ ಕಮಲಾಕ್ಷ, ವಿಶ್ರಾಂತ ಮುಖ್ಯೋಪಾಧ್ಯಾಯ ಬಿ.ಪುರುಷೋತ್ತಮ, ಯಕ್ಷಗಾನದ ಹಿರಿಯ ಕಲಾವಿದ ದಿವಾಣ ಶಿವಶಂಕರ ಭಟ್ ಹಾಗೂ ಕನ್ನಡ ವಿಭಾಗದ ಪ್ರಾಧ್ಯಾಪಕರು, ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಯಕ್ಷಗಾನ ಕಲಾಸಕ್ತ ಹಿರಿಯರು ಸಮಿತಿಯ ಸದಸ್ಯರಾಗಿದ್ದಾರೆ.

ಯಕ್ಷಗಾನ ಸಂಶೋಧನಾ ಕೇಂದ್ರದ ಆರಂಭ ಮಾತ್ರ ಇದಾಗಿದ್ದು, ಇದನ್ನು ಮುನ್ನಡೆಸಿ ಬೆಳೆಸುವ ಗುರುತರ ಹೊಣೆ ಸರಕಾರದ ಭಾಗದಿಂದ ಆಗಬೇಕಾಗಿದೆ. ಅದಕ್ಕೆ ಬೇಕಾದ ಒತ್ತಾಸೆ ಸಂಬಂಧಪಟ್ಟವರಿಂದ ನಿರಂತರ ನಡೆಯಬೇಕಾಗಿದೆ. ಯಕ್ಷಗಾನ ಸಂಶೋಧನಾ ಕೇಂದ್ರದ ಅಂಗವಾಗಿ ಮುಂದಿನ ದಿನಗಳಲ್ಲಿ ವಿವಿಧ ಯೋಜನೆಗಳನ್ನು ರೂಪಿಸುವ ಆಲೋಚನೆಯಿದೆ.

ಕಣ್ಣೂರು ವಿಶ್ವವಿದ್ಯಾನಿಲಯ ಕಲೋತ್ಸವಗಳಲ್ಲಿ ಪ್ರತಿ ವರ್ಷ ಯಕ್ಷಗಾನ ಪ್ರದರ್ಶನ ನೀಡುವಲ್ಲಿ ಕಾಸರಗೋಡು ಸರಕಾರಿ ಕಾಲೇಜು ಪ್ರಯತ್ನಿಸಿದೆ ಹಾಗೂ ಈ ನಿಟ್ಟಿನಲ್ಲಿ ಹೊಸ ಯಕ್ಷಗಾನ ಕಲಾವಿದರನ್ನು ಸೃಷ್ಟಿಸಿದೆ. ಸರಕಾರಿ ಕಾಲೇಜಿನಲ್ಲಿ ಯಕ್ಷಗಾನ ಸಂಶೋಧನಾ ಕೇಂದ್ರ ನಿರ್ಮಿಸಿರುವುದು ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.

ಮ್ಯೂಸಿಯಂನಲ್ಲಿ ಏನಿದೆ?

ತೆಂಕುತಿಟ್ಟು ಯಕ್ಷಗಾನ ಪ್ರಕಾರಕ್ಕೆ ಸಂಬಂಧಿಸಿದ ವಿವಿಧ ಸಾಮಗ್ರಿಗಳು ಗ್ರಂಥಾಲಯ ಹಾಗೂ ಮ್ಯೂಸಿಯಂನಲ್ಲಿವೆ. ಮುಖವರ್ಣಿಕೆಗಳು, ವಿವಿಧ ಕಿರೀಟಗಳಾದ ಹನುಮಂತನ ಕಿರೀಟ, ಸಿಂಹದ ಮುಖವಾಡ, ಕುತ್ತರಿ, ಕೋಲುಕಿರೀಟ, ಕೇಸರಿಪಟ್ಟಿ, ದೇವಿಮುಡಿ ಇತ್ಯಾದಿ. ವೇಷಗಳಲ್ಲಿ ರಾಜವೇಷ, ಸ್ತ್ರೀವೇಷ, ಬಣ್ಣದ ವೇಷ, ಪುಂಡುಟೋಪನ್ ವೇಷ, ತುರಾಯಿ ವೇಷ, ಗೆಜ್ಜೆಗಳಲ್ಲಿ ಮಾರ್ಮಲೆ ಗೆಜ್ಜೆ, ಕಾಲು ಖಡಗ, ಮಹಿಷಾಸುರನ ಕೊಂಬು, ವಿವಿಧ ಯಕ್ಷಗಾನ ಆಯುಧಗಳು ಮ್ಯೂಸಿಯಂನಲ್ಲಿವೆ. ಗ್ರಂಥಾಲಯದ ಸಂಗ್ರಹದಲ್ಲಿ ಯಕ್ಷಗಾನ ಸಂಶೋಧನಾ ಗ್ರಂಥಗಳು, ಪ್ರಸಂಗ ಪುಸ್ತಕ, ಪಾರ್ಥಿಸುಬ್ಬನ ಪ್ರಸಂಗಗಳು, ಇತರ ಕೆಲವ ಯಕ್ಷಗಾನ ಸಂಬಂಧಿತ ಪ್ರಚಲಿತ ಪುಸ್ತಕಗಳು, ಪ್ರಸಿದ್ಧ ಪುರಾಣ ಕೃತಿಗಳು, ಕಾಸರಗೋಡಿನ ಕಲೆಗಳಿಗೆ ಸಂಬಂಧಿಸಿದ ಪ್ರಸಿದ್ಧ ಪುಸ್ತಕಗಳಿವೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಇವು ಉಪಯುಕ್ತವಾಗಲಿವೆ.

ಕಾಸರಗೋಡಿಗೂ ಯಕ್ಷಗಾನ ಕಲೆಗೂ ಹೊಕ್ಕುಳ ಬಳ್ಳಿಯ ಸಂಬಂಧ ಎಂದರೆ ತಪ್ಪಾಗಲಾರದು. ಯಕ್ಷಗಾನ ಆಚಾರ್ಯ ಪಾರ್ತಿಸುಬ್ಬನು ಈ ಮಣ್ಣಿನ ಹೆಮ್ಮೆಯ ಪುತ್ರ. ಕಾಸರಗೋಡಿನ ಮೂಲೆ ಮೂಲೆಗಳಲ್ಲಿ ನೂರಕ್ಕಿಂತಲೂ ಹೆಚ್ಚು ಯಕ್ಷಗಾನ ಕಲಾವಿದರು ಇದ್ದಾರೆ. ಅದರಲ್ಲಿ ವತ್ತಿಪರರೂ ಇದ್ದಾರೆ, ಹವ್ಯಾಸಿಗಳೂ ಇದ್ದಾರೆ. ಯಕ್ಷಗಾನದ ದಂತಕತೆಯೆನಿಸಿದ ಚಂದ್ರಗಿರಿ ಅಂಬು, ಬಣ್ಣದ ಮಾಲಿಂಗ, ಬಲಿಪ ನಾರಾಯಣ ಭಾಗವತ, ಶೇಣಿಗೋಪಾಲಕಷ್ಣ ಭಟ್, ಚಿಪ್ಪಾರು ಕಷ್ಣಯ್ಯ ಬಲ್ಲಾಳ್ ಮೊದಲಾದವರು ಯಕ್ಷಗಾನದ ಚರಿತ್ರೆಯಲ್ಲಿ ಅಳಿಸಲಾರದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಇವರಲ್ಲದೆ ಎರಡನೇ ಹಾಗೂ ಮೂರನೇ ತಲೆಮಾರು ಕೂಡಾ ಈ ಕಲೆಯಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ ಎನ್ನುವುದೂ ಕಾಸರಗೋಡಿಗೆ ಅಭಿಮಾನದ ವಿಷಯ. ಜಾತಿಮತ ಭೇದವಿಲ್ಲದೆ ಈ ಕಲೆಯ ಸತ್ವವನ್ನು ಈ ಮಣ್ಣಿನ ಸಂಸ್ಕೃತಿ ಹೀರಿಕೊಂಡಿದೆ ಎಂದರೆ ಅದು ಅತಿಶಯವಲ್ಲ.

ಉದ್ದೇಶಗಳು...

  • ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲವನ್ನು ಸಂಗ್ರಹಿಸುವ ಸುಸಜ್ಜಿತವಾದ ಯಕ್ಷಗಾನ ಮ್ಯೂಸಿಯಂ.
  • ಕೇರಳ ಮತ್ತು ಕರ್ನಾಟಕಗಳಲ್ಲಿ ವ್ಯಾಪಿಸಿರುವ ಯಕ್ಷಗಾನ ಕಲೆಯ ವಿವಿಧ ಪ್ರಬೇಧಗಳನ್ನು ಅಧ್ಯಯನ ನಡೆಸುವ ಕೇಂದ್ರವಾಗಿ ಬೆಳೆಸುವುದು.
  • ಯಕ್ಷಗಾನ ಬಯಲಾಟ, ತಾಳಮದ್ದಳೆ, ಬೊಂಬೆಯಾಟದ ಪ್ರಾತಿನಿಧಿಕ ಪ್ರಯೋಗಗಳ ದಶ್ಯ ಮತ್ತು ಶ್ರಾವ್ಯರೂಪದ ದಾಖಲೀಕರಣ.
  • ಪ್ರಸಂಗ ಸಾಹಿತ್ಯವನ್ನೂ ಒಳಗೊಂಡಂತೆ ಯಕ್ಷಗಾನದ ಹಸ್ತಪ್ರತಿಗಳ ಸಂಗ್ರಹ ಮತ್ತು ಸಂರಕ್ಷಣೆ.
  • ಕಾಸರಗೋಡಿನ ಯಕ್ಷಗಾನ ಕಲಾವಿದರ ಮಾಹಿತಿಯನ್ನು ಒಳಗೊಂಡ ಸಂಪೂರ್ಣ ಡೆರೆಕ್ಟರಿ ತಯಾರಿ.
  • ಯಕ್ಷಗಾನದ ಎಲ್ಲ ಆಯಾಮಗಳನ್ನು ಒಂದು ಶೆಕ್ಷಣಿಕ ಶಿಸ್ತಿಗೆ ಒಳಪಡಿಸುವುದು.
  • ಯಕ್ಷಗಾನ ಪತ್ರಿಕೆಯನ್ನು ನಿಯತವಾಗಿ ಪ್ರಕಟಗೊಳಿಸುವುದು.
  • ಯಕ್ಷಗಾನ ತರಬೇತಿಸ ಶಿಬಿರ, ವಿಚಾರ ಸಂಕಿರಣ ಹಮ್ಮಿಕೊಳ್ಳುವುದು.


  • *********************


    ಕೃಪೆ : vijaykarnataka


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ